ಗದಗ( ಸತ್ಯ ದರ್ಶನ ) ಸೆಪ್ಟೆಂಬರ್ 26: ಮಾದಕ ವಸ್ತುಗಳು, ತಂಬಾಕು, ಮದ್ಯದಂತಹ ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ವಕೀಲರ ಸಂಘ, ಪೊಲೀಸ್ ಇಲಾಖೆ, ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಸಬಲೀಕರಣ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಜಿಲ್ಲಾ ಘಟಕ ಹಾಗೂ ಮೈತ್ರಿ ಸಮಗ್ರ ವ್ಯಸನಿಗಳ ಪುನರ್ ವಸತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಗರದ ಆದರ್ಶ ಶಿಕ್ಷಣ ಸಮಿತಿಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರದಂದು ಆ್ಯಂಟಿ ಡ್ರಗ್ ಕ್ಲಬ್ ಮತ್ತು ಮಾದಕ ವಸ್ತುಗಳ ದುರ್ಬಳಕೆ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾನೂನು ಸೇವೆಗಳ ಪ್ರಾಧಿಕಾರವು ಪ್ರತಿ ಕಾಲೇಜುಗಳಲ್ಲಿ ಆ್ಯಂಟಿ ಡ್ರಗ್ ಕ್ಲಬ್‍ಗಳನ್ನು ರಚಿಸಿ, ಆ ಮೂಲಕ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುತ್ತಿದೆ. ಆ್ಯಂಟಿ ಡ್ರಗ್ ಕ್ಲಬ್‍ಗಳು ಶಾಲಾ ಕಾಲೇಜಿನಲ್ಲಿ ಮಾದಕ ವಸ್ತುಗಳ ದುರ್ಬಳಕೆ ವಿರುದ್ಧ ಓಟ, ಸಾಕ್ಷರತಾ ಆಂದೋಲನ, ಅರಿವು ಶಿಬಿರ, ಪಾಲಕರ, ಶಿಕ್ಷಕರ ಸಭೆ, ವಿಚಾರಗೋಷ್ಠಿಯಂತಹ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಮಾರಕವಾಗಿರುವ ಮಾದಕ ವಸ್ತುಗಳಿಂದ ದೂರವಿರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ಬಸವರಾಜ ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಂ.ಎಂ.ಕಾಂಬಳೆ ಮಾತನಾಡಿ, ಸದ್ಯದ ದಿನಮಾನಗಳಲ್ಲಿ ಹದಿಹರೆಯದ ವಯಸ್ಸಿನವರು ತಂಬಾಕು, ಮದ್ಯ, ಮಾದಕ ವಸ್ತುಗಳಂತಹ ದುಶ್ಚಟಕ್ಕೆ ಬಲಿಯಾಗಿ ತಮ್ಮ ಅಮೂಲ್ಯವಾದ ಭವಿಷ್ಯವನ್ನು ತಾವೇ ನಾಶ ಮಾಡಿಕೊಳ್ಳುತ್ತಿದ್ದಾರೆ, ಶಾಲಾ ಕಾಲೇಜುಗಳಲ್ಲಿರುವ ಹಂತದಲ್ಲಿಯೇ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಾಗೃತಿ ಕಾರ್ಯಕ್ರಮಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ, ವಿದ್ಯಾರ್ಥಿಗಳು ಇದಕ್ಕೆ ಕೈ ಜೋಡಿಸುವ ಮೂಲಕ ತಂಬಾಕು, ದುಶ್ಚಟಗಳ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗದೀಶ ನುಚ್ಚಿನ ಮಾತನಾಡಿ, ಜಗತ್ತಿನಲ್ಲಿ ಪ್ರತಿ ವರ್ಷ ಸುಮಾರು 6 ಕೋಟಿ ಸಾವುಗಳು ಸಂಭವಿಸಿದರೆ, ಅದರಲ್ಲಿ 70 ಲಕ್ಷ ಜನರು ಮಾದಕ ದ್ರವ್ಯ ಸೇವನೆಯಿಂದ ಸಾಯುತ್ತಿದ್ದಾರೆ, 7 ಲಕ್ಷ ಜನ ಧೂಮಪಾನದಿಂದ ಸಾವಿಗೀಡಾಗುತ್ತಿದ್ದಾರೆ. ಗದಗ ಜಿಲ್ಲೆಯ 18 ವರ್ಷ ಮೇಲ್ಪಟ್ಟ ಒಟ್ಟು ಜನರಲ್ಲಿ ಶೇ.28.6 ರಷ್ಟು ಜನ ತಂಬಾಕು ಜಗಿಯುತ್ತಿದ್ದು, ಶೇ. 4 ರಷ್ಟು ಜನ ಧೂಮಪಾನ ಚಟಕ್ಕೆ ಸಿಲುಕಿದ್ದಾರೆ. ಇದರಿಂದ ಸ್ವಾಸ್ಥ್ಯ ಸಮಾಜ ಹಾಗೂ ಕುಟುಂಬ ಹಾಳಾಗುತ್ತಿದ್ದು, ಯುವ ಸಮೂಹ ಜಾಗೃತರಾಗಿ, ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬೆಟಗೇರಿ ಸಿಪಿಐ ಬಿ.ಬಿ.ಸುಬ್ಬಾಪೂರಮಠ ಮಾತನಾಡಿ ಇಂದಿನ ಸಮಾಜದಲ್ಲಿ ಮಾದಕ ವಸ್ತುಗಳ ದುರ್ಬಳಕೆ ಹೆಚ್ಚಾಗಿದ್ದು, ದುಶ್ಚಟ ಮಾಡುವವರ ಸಂಗದಿಂದ ವಿದ್ಯಾರ್ಥಿ ಸಮೂಹವೂ ಇದಕ್ಕೆ ಬಲಿಯಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯುವ ಸಮೂಹ ಅಕ್ರಮ ಮಾದಕ ವಸ್ತುಗಳ ಬಳಕೆ, ಸಾಗಾಟದಂತ ಮಾಹಿತಿ ಕಂಡುಬಂದರೆ ಪೊಲಿಸರಿಗೆ ಧೈರ್ಯವಾಗಿ ಮಾಹಿತಿ ನೀಡಬೇಕು ಎಂದರು. ಜಿಲ್ಲಾ ಎನ್‍ಎಸ್‍ಎಸ್ ನೋಡಲ್ ಅಧಿಕಾರಿ ಹಾಗೂ ಆ್ಯಂಟಿ ಡ್ರಗ್ ಕ್ಲಬ್ ಸಂಯೋಜಕ ವಿ.ಎಚ್. ಕೊಳ್ಳಿ ಅವರು ವ್ಯಸನ ಮುಕ್ತ ಸಮಾಜ ನಿರ್ಮಾಣ ವಿದ್ಯಾರ್ಥಿಗಳಿಂದಲೇ ಆರಂಭವಾಗಬೇಕಿದೆ ಎಂದರು.
ಜಿಮ್ಸ್‍ನ ಮಾನಸಿಕ ತಜ್ಞ ವೈದ್ಯ ಡಾ. ಸೋಮಶೇಖರ ಬಿಜ್ಜಳ ವಿಶೇಷ ಉಪನ್ಯಾಸ ನೀಡಿ, ಹದಿಹರೆಯದ ವಯಸ್ಸಲ್ಲಿ ದೇಹದಲ್ಲಿ ಹಲವು ಬದಲಾವಣೆಗಳೊಂದಿಗೆ ಮಾನಸಿಕ, ಭಾವನಾತ್ಮಕವಾಗಿಯೂ ಹಲವು ಬದಲಾವಣೆಗಳಾಗುತ್ತವೆ. ಈ ಸಂದರ್ಭದಲ್ಲಿ ಬೇರೆಯವರ ಪ್ರಭಾವಕ್ಕೊಳಗಾಗಿ, ತಪ್ಪು ಕಲ್ಪನೆಗಳಿಂದ ಮಾದಕ ವಸ್ತುಗಳ ಸೇವನೆ ಮಾಡುತ್ತಿದ್ದು, ವಿದ್ಯಾರ್ಥಿಗಳು ಇದಕ್ಕೆ ಅವಕಾಶ ಕೊಡದೇ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಆದರ್ಶ ಶಿಕ್ಷಣ ಸಮಿತಿಯ ಚೇರ್‍ಮನ್ ಆನಂದ ಪೊತ್ನೀಸ್ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೇ ಇತರರಲ್ಲೂ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ, ಪ್ರಾ. ರವಿ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆ, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕು.ಸೌಜನ್ಯಾ ತೆಂಬದಮನಿ ಪ್ರಾರ್ಥಿಸಿದರು. ಸುಮನ್ ಕುಲಕರ್ಣಿ ಸ್ವಾಗತಿಸಿದರು. ಉಪನ್ಯಾಸಕ ಬಸವರಾಜ ಟಿ.ಪಿ ನಿರೂಪಿಸಿದರು. ರವಿ ಡಿ. ನಾಯ್ಕ್ ವಂದಿಸಿದರು.
