ಗದಗ ( ಸೆಪ್ಟೆಂಬರ್ 5 )ಪ್ರತಿಯೊಬ್ಬರ ಜೀವನದಲ್ಲಿಯೂ ಗುರಿ ಮತ್ತು ಗುರು ಅನಿವಾರ್ಯ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು
ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಜರುಗಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕøತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 
ನಮ್ಮ ದೇಶ ಕಂಡ ಅತ್ಯಂತ ಶ್ರೇಷ್ಟ ರಾಷ್ಟ್ರಪತಿಗಳು, ತತ್ವಜ್ಞಾನಿಗಳು, ಮತ್ತು ಪ್ರಾಧ್ಯಾಪಕರಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಿರುವುದು ಅರ್ಥಪೂರ್ಣ . ಏಕೆಂದರೆ ರಾಧಾಕೃಷ್ಣನ್ ಅವರು ಶಿಕ್ಷಕರ ಬಗ್ಗೆ ಅಪಾರವಾದ ಪ್ರೀತಿ ಮತ್ತು ಕಾಳಜಿಯನ್ನು ಹೊಂದಿದವರಾಗಿದ್ದರು ಎಂದರು.
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಅದೇ ರೀತಿ ವಿದ್ಯೆ ಇಲ್ಲದವ ಹದ್ದಿಗಿಂತ ಕಡೆ ಎಂಬ ಮಾತು ಕೂಡ ಶಿಕ್ಷಣದ ಮಹತ್ವವನ್ನು ಎತ್ತಿ ಹೇಳುವ ಸಾರ್ವಕಾಲಿಕ ಸತ್ಯವಾಗಿದೆ. ಒಬ್ಬ ಮನುಷ್ಯ ಸುಸಂಸ್ಕøತ ವ್ಯಕ್ತಿಯಾಗಿ ರೂಪುಗೊಳ್ಳಲು ಶಿಕ್ಷಣ ಅತ್ಯಂತ ಪ್ರದಾನ ಪಾತ್ರ ವಹಿಸುತ್ತದೆ. ಶಿಕ್ಷಣವಿಲ್ಲದಿದ್ದರೆ ಮನುಷ್ಯನಲ್ಲಿ ಆತ್ಮವಿಶ್ವಾಸ ಕಡಿಮೆಯಾಗಿ ಆತನಲ್ಲಿ ಕೀಳರಿಮೆ ಹೆಚ್ಚುತ್ತದೆ. ಆದರೆ ಆತನಿಗೆ ಉತ್ತಮ ಶಿಕ್ಷಕ ದೊರೆತಲ್ಲಿ ಆತ ಸಮಾಜದಲ್ಲಿ ಧೈರ್ಯದಿಂದ ತಲೆಯೆತ್ತಿ ಬದುಕಲು ಸಹಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. 
ಈಗ ಅನೇಕ ವಿಷಯಗಳನ್ನು ಕಂಪ್ಯೂಟರ್ ಮೂಲಕವೇ ಕಲಿಯಬಹುದು. ಆದರೆ ವ್ಯಕ್ತಿಯ ನಡೆನುಡಿ, ಉತ್ತಮ ಸಂಸ್ಕøತಿಗಳನ್ನು ಕಂಪ್ಯೂಟರುಗಳಿಗೆ ಕಲಿಸಿಕೊಡಲು ಸಾಧ್ಯವಿಲ್ಲ. ಇದಕ್ಕೆ ಉತ್ತಮ ಶಿಕ್ಷಕರು ಅಥವಾ ಉತ್ತಮ ಗುರು ಅತ್ಯಗತ್ಯ. ಆದ್ದರಿಂದ ಎಲ್ಲ ಕಾಲಕ್ಕೂ ಎಲ್ಲಾ ಕಡೆಗಳಲ್ಲೂ ಶಿಕ್ಷಕರು ಅನಿವಾರ್ಯ ಎಂದು ಹೇಳಿದರು.
ಇಂದು ಇಡೀ ಜಗತ್ತೇ ಪರಸ್ಪರ ಪೈಪೋಟಿಯ ಯುಗದಲ್ಲಿ ಮುನ್ನಡೆಯುತ್ತ ಸಾಗಿದೆ. ಅದು ವಿಜ್ಞಾನವೇ ಇರಲಿ, ತಂತ್ರಜ್ಞಾನವಿರಲಿ, ತತ್ವಜ್ಞಾನವಾಗಿರಲಿ, ಸಾಹಿತ್ಯವೇ ಆಗಿರಲಿ ಎಲ್ಲ ಕ್ಷೇತ್ರಗಳಿಗೂ ಶಿಕ್ಷಣ ಅನಿವಾರ್ಯ. ಹೀಗಾಗಿ ಯಾರೂ ಶಿಕ್ಷಣ ವಂಚಿತ ಆಗಬಾರದು ಎಂದು ಸರ್ಕಾರವು ಸರ್ವರಿಗೂ ಶಿಕ್ಷಣ ಸುಲಭವಾಗಿ ದೊರೆಯಬೇಕೆಂದು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್‍ನಲ್ಲಿಯೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರೈತರ ಮಕ್ಕಳಿಗೂ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತಂದು ಹಳ್ಳಿಹಳ್ಳಿಗಳಲ್ಲಿರುವ ಕೃಷಿಕರ ಮಕ್ಕಳು ಕೂಡ ಹೆಚ್ಚು ಹೆಚ್ಚು ಶಿಕ್ಷಣವನ್ನು ಪಡೆದುಕೊಳ್ಳುವುದಕ್ಕೆ ವಿಶೇಷ ಯೋಜನೆ ನೀಡಿದ್ದಾರೆ. ಅನೇಕ ಹಳ್ಳಿಗಳಲ್ಲಿ ಬಡತನದಲ್ಲಿರುವ ರೈತರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ನಡೆಸುತ್ತಿರುವ ಪರದಾಟವನ್ನು ತಪ್ಪಿಸಲು ಯೋಜನೆ ಸಹಕಾರಿಯಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸರ್ಕಾರದ ಜೊತೆಗೆ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ವಿಶೇಷ ಕೊಡುಗೆ ನೀಡಿರುವುದನ್ನು ನಾವೆಲ್ಲ ಸ್ಮರಿಸಲೇಬೇಕು ಎಂದರು.
ಬೆಂಗಳೂರನ್ನು ನಾವು ಹೇಗೆ ಸಿಲಿಕಾನ್ ವ್ಯಾಲಿಯನ್ನಾಗಿ ರೂಪಿಸಿ ಇಡೀ ಜಗತ್ತಿನ ಗಮನ ಸೆಳೆದಿದ್ದೇವೆಯೋ ಅದೇ ರೀತಿಯಲ್ಲಿ ಕರ್ನಾಟಕವನ್ನು ವಿಶ್ವ ಮಟ್ಟದಲ್ಲಿ ಶೈಕ್ಷಣಿಕ ರಾಜಧಾನಿಯನ್ನಾಗಿ ರೂಪಿಸಲು ನಾವೆಲ್ಲ ಶ್ರಮ ವಹಿಸಲೇಬೇಕು. ಒಟ್ಟಾರೆ ನಮ್ಮ ಕರ್ನಾಟಕವನ್ನು ಜಗತ್ತಿನ ನಂಬರ್ 1 ಶಿಕ್ಷಣ ಕೇಂದ್ರವನ್ನಾಗಿ , ಶೈಕ್ಷಣಿಕ ರಾಜಧಾನಿಯನ್ನಾಗಿ ರೂಪಿಸುವ ಗುರಿಯೊಂದಿಗೆ ನಾವೆಲ್ಲ ಕೆಲಸ ಮಾಡೋಣ ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ ಅಮೇರಿಕದಂತಹ ಮುಂದುವರೆದ ದೇಶಗಳು ಸಹ ಶಿಕ್ಷಕರು ಮತ್ತು ವಿಜ್ಞಾನಿಗಳನ್ನು ಗೌರವದಿಂದ ಕಾಣುತ್ತಿವೆ. ಫ್ರಾನ್ಸ್ ನ್ಯಾಯಾಲಯದಲ್ಲಿ ಶಿಕ್ಷಕರನ್ನು ವಿಚಾರಣೆ ಮಾಡಬೇಕಾದಲ್ಲಿ ಗೌರವಯುತವಾಗಿ ಅವರನ್ನು ಆಸನದಲ್ಲಿ ಕೂರಿಸಿ ವಿಚಾರಣೆಯನ್ನು ಮುಂದುವರೆಸುತ್ತಾರೆ. ಅದರಂತೆ ಜಪಾನ್‍ನಲ್ಲಿಯೂ ಸಹ ಶಿಕ್ಷಕರ ಮೇಲೆ ದೂರು ಸ್ವೀಕೃತಿಯಾದಲ್ಲಿ ಸರ್ಕಾರದ ವಿಶೇಷ ಅನುಮತಿ ಪಡೆದು ಶಿಕ್ಷಕರನ್ನು ವಿಚಾರಣೆಗೆ ಅನುಮತಿ ನೀಡುತ್ತಾರೆ ಹಾಗೂ ಕೋರಿಯಾ ದೇಶದಲ್ಲಿ ಸರ್ಕಾರದ ಸಚಿವರಿಗಿರುವ ಸ್ಥಾನಮಾನವನ್ನು ಶಿಕ್ಷಕರಿಗೂ ನೀಡುವ ಮೂಲಕ ಶಿಕ್ಷಕರನ್ನು ಉನ್ನತ ಮಟ್ಟದಲ್ಲಿ ಗೌರವಿಸಲಾಗುತ್ತಿದೆ. ಹೀಗಿರುವಾಗ ಶಿಕ್ಷಕರಾದ ನಾವು ನೀವೆಲ್ಲ ಆತ್ಮವಿಮರ್ಶೆ ಮಾಡಿಕೊಳ್ಳುವ ಮೂಲಕ ನಮ್ಮ ಬೋಧನಾ ಕೌಶಲ್ಯವನ್ನು ಗುರುತಿಸಿಕೊಳ್ಳುವ ಮೂಲಕ ಪರಿಣಾಮಕಾರಿ ಬೋಧನೆಗೆ ಮುಂದಾಗೋಣ ಎಂದರು. 
ಹೊಸಹಳ್ಳಿ ಸಂಸ್ಥಾನಮಠದ ಅಭಿನವ ಬೂದೀಶ್ವರ ಮಹಾಸ್ವಾಮಿಗಳು ಉಪನ್ಯಾಸ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವಲಿಂಗಪ್ಪ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಜಿಲ್ಲಾ ಪ್ರಶಸ್ತಿ ಪುರಸ್ಕøತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನವನ್ನು ನೇರವೇರಿಸಲಾಯಿತು. ಪುಟ್ಟರಾಜ ಸಂಗೀತ ವಿದ್ಯಾಲಯದ ವಿದ್ಯಾರ್ಥಿಯರು ಪ್ರಾರ್ಥಿಸಿದರು.
ಮುಖ್ಯ ಅತಿಥಿಗಳಾಗಿ ಮಾರ್ಕೆಟಿಂಗ್ ಕಮ್ಯುನಿಕೇಷನ್ ಆಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್‍ನ ಅಧ್ಯಕ್ಷರಾದ ಎಂ.ಎಸ್. ಕರಿಗೌಡ್ರ , ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಉಷಾ ದಾಸರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ಧಪ್ಪ ಪಲ್ಲೇದ್, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಶೀಲಾ ಬಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಿವಪ್ರಕಾಶ್ ದೇವರಾಜ್, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ರವಿ ಗುಂಜೀಕರ್ ಸೇರಿದಂತೆ ಶಿಕ್ಷಕರ ವಿವಿಧ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು.
