Satya Darshana
ಬಿಸಿ ಬಿಸಿ ಸುದ್ದಿ
ದೇಶ-ವಿದೇಶಬಿಸಿ ಬಿಸಿ ಸುದ್ದಿ

75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಹಲವು ಮೊದಲು, ವಿಭಿನ್ನ ಆಚರಣೆ * 30 ನಿಮಿಷ ವಿಳಂಬವಾಗಿ ಆರಂಭ, 24,000 ಜನರು ಮಾತ್ರ ಭಾಗಿ

ನವದೆಹಲಿ  (ಜ. 26): ಕೊರೋನಾ  ಸಾಂಕ್ರಾಮಿಕದ ನಡುವೆಯೇ 73ನೇ ಗಣರಾಜ್ಯೋತ್ಸವ ಆಚರಣೆಗೆ ಇಡೀ ರಾಷ್ಟ್ರ ಸಿದ್ಧವಾಗಿದೆ. ಭಾರತ ಬ್ರಿಟಿಷರ ಕಪಿಮುಷ್ಠಿಯಿಂದ ಸ್ವತಂತ್ರಗೊಂಡು 75 ವರ್ಷಗಳು ತುಂಬುತ್ತಿರುವ ಹೊತ್ತಲ್ಲಿ ಈ ಭಾರಿ ವಿಭಿನ್ನವಾಗಿ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ಬಾರಿ ನವದೆಹಲಿಯ ರಾಜಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಪಥಸಂಚಲನಕ್ಕೆ ‘ಇಂಡಿಯಾ 75’ ಎಂಬ ಥೀಮ್ ಇದೆ. ಈ ಬಾರಿ ಗಣರಾಜ್ಯೋತ್ಸವ ಹೇಗೆ ಭಿನ್ನ ಎಂಬ ಮಾಹಿತಿ ಇಲ್ಲಿದೆ.

ಗಣರಾಜ್ಯ ಕಾರ್ಯಕ್ರಮ 30 ನಿಮಿಷ ವಿಳಂಬ: ಗಣರಾಜ್ಯೋತ್ಸವ ಆರಂಭದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ನವದೆಹಲಿಯ ರಾಜಪಥದಲ್ಲಿ ನಡೆಯುವ ಪಥಸಂಚಲನ 30 ನಿಮಿಷ ವಿಳಂಬ ಆಗಲಿದೆ. ಜ.26ರ ಬೆಳಗ್ಗೆ 10 ಗಂಟೆಯ ಬದಲಾಗಿ 10:30ರಿಂದ ಆರಂಭವಾಗಲಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಅದರ ಮುನ್ನೆಚ್ಚರಿಕೆ, ಬಿಗಿ ಕ್ರಮದಿಂದಾಗಿ ಮತ್ತು ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯ ನಿರತವಾಗಿದ್ದ ಸಂದರ್ಭದಲ್ಲಿ ಗಡಿ ನಿಯಂತ್ರಣ ರೇಖೆಯ ಬಳಿ ಪ್ರಾಣ ಕಳೆದುಕೊಂಡ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ಹಿನ್ನೆಲೆಯಲ್ಲಿ 30 ನಿಮಿಷ ತಡವಾಗಿ ಆರಂಭವಾಗುತ್ತಿದೆ.

90 ನಿಮಿಷಗಳ ಪಥ ಸಂಚಲನ: ಕಳೆದ ವರ್ಷದಂತೆ ಈ ಬಾರಿಯೂ ಪಥಸಂಚಲನ 90 ನಿಮಿಷಗಳ ಕಾಲ ನಡೆಯಲಿದೆ. ಪರೇಡ್‌ಗೂ  ಮುನ್ನ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ  ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಿದ್ದಾರೆ. ದೆಹಲಿ ವಲಯದ ಕಮಾಂಡಿಂಗ್‌ ಜನರಲ್ ಅಧಿಕಾರಿ ಲೆಫ್ಟಿನೆಂಟ್‌ ಜನರಲ್ ವಿಜಯ್ ಕುಮಾರ ಮಿಶ್ರಾ ಅವರು ಪರೇಡ್‌ ಕಮಾಂಡರ್‌ ಆಗಿ ನೇತೃತ್ವ ವಹಿಸಲಿದ್ದಾರೆ. ಕಾರ್ಯಕ್ರಮ ಬೆಳಿಗ್ಗೆ 10:30ರಿಂದ ಆರಂಭವಾಗಿ ಮಧ್ಯಾಹ್ನ12ಕ್ಕೆ ಮುಕ್ತಾಯವಾಗಲಿದೆ.

ಸತತ 2ನೇ ವರ್ಷ ವಿದೇಶಿ ಅತಿಥಿ ಇಲ್ಲ: ರಾಜತಾಂತ್ರಿಕ ಕಾರಣಗಳಿಗಾಗಿ ಪ್ರತಿ ವರ್ಷ ಗಣರಾಜ್ಯೋತ್ಸಕ್ಕೆ ವಿದೇಶಿ ಗಣ್ಯರನ್ನು ಆಹ್ವಾನಿಸುವ ಸಂಪ್ರದಾಯವನ್ನು ಭಾರತ ಹೊಂದಿದೆ. ಈ ವರ್ಷ ಮಧ್ಯಏಷ್ಯಾದ 5 ದೇಶಗಳ ನಾಯಕರನ್ನು ಆಹ್ವಾನಿಸುವ ಉದ್ದೇಶವನ್ನು ಸರ್ಕಾರ ಹೊಂದಿತ್ತು. ಆದರೆ ಕೋವಿಡ್‌ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯೂ ವಿದೇಶಿ ಅತಿಥಿಗಳಿಗೆ ಆಹ್ವಾನ ನೀಡದಿರಲು ನಿರ್ಧರಿಸಲಾಗಿದೆ. ಇದರೊಂದಿಗೆ ಸತತ 2ನೇ ವರ್ಷವೂ ವಿದೇಶಿ ಅತಿಥಿಗಳಿಲ್ಲದೇ ಕಾರ್ಯಕ್ರಮ ನಡೆಯಲಿದೆ.

5 ದಿನ ಸಂಭ್ರಮಾಚರಣೆ: ಈವರೆಗೆ ಗಣರಾಜ್ಯೋತ್ಸವ ಸಂಭ್ರಮ ಜನವರಿ 24ರಿಂದ ಆರಂಭವಾಗಿ ಜ.29ರ ವರೆಗೂ ನಡೆಯುತ್ತಿತ್ತು. ಈ ಬಾರಿ ಸ್ವಾತಂತ್ರ್ಯ ಸೇನಾನಿ ಸುಭಾಷ್‌ ಚಂದ್ರಬೋಸ್‌ ಅವರ ಜನ್ಮದಿನವನ್ನು ಐತಿಹಾಸಿಕವಾಗಿಸುವ ಉದ್ದೇಶದಿಂದ ಜ.23ರಿಂದಲೇ ಗಣರಾಜ್ಯೋತ್ಸವ ಸಂಭ್ರಮ ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಅದರಂತೆ .23ರಿಂದ ಜ.29ರ ವರೆಗೆ ಸತತ 5 ದಿನಗಳ ಕಾಲ ಗಣರಾಜ್ಯೋತ್ಸವ ಆಚರಣೆಯಾಗಲಿದೆ.

 

 

Related posts

ರೈತರಿಗೆ ಹನಿ ನೀರಾವರಿ ಸೌಲಭ್ಯಗಳು

satyadarshana

ಜಾನುವಾರು ಜಾತ್ರೆ , ಸಾಗಾಣಿಕೆ ನಿಷೇಧ.

satyadarshana

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಶ್ರೀ ಮಾರುತೇಶ್ವರ ಮಹಾ ರಥೋತ್ಸವ ಸಂಭ್ರಮದಿಂದ ಜರಗಿತು* “”

satyadarshana