Debates
oi-Trupti Hegde
By ಒನ್ ಇಂಡಿಯಾ ಡೆಸ್ಕ್
|
Updated: Monday, June 11, 2018, 13:18 [IST]
ಖಾತೆ ಬದಲಾವಣೆ ಮಾಡಲು ಜಿ ಟಿ ದೇವೇಗೌಡ್ರು ಪ್ಲಾನ್ | ಇದು ಸರಿಯಾ ತಪ್ಪಾ? | Oneindia Kannada
ಬೆಂಗಳೂರು, ಜೂನ್ 11: ಶಾಸಕ ಜಿಟಿ ದೇವೇಗೌಡರ ಖಾತೆ ಬದಲಾವಣೆ ಕುರಿತು ಇದೀಗ ಬಿಸಿ ಬಿಸಿ ಚರ್ಚೆ ಎದ್ದಿದೆ. ಮೊನ್ನೆ ಖಾತೆ ಹಂಚಿಕೆ ಸಮಯದಲ್ಲಿ ಅವರಿಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದು ಸಾಕಷ್ಟು ವಿವಾದ ಸೃಷ್ಟಿಸಿತ್ತು. ವಿದ್ಯಾರ್ಹತೆ 8 ನೇ ತರಗತಿ, ಖಾತೆ -ಉನ್ನತ ಶಿಕ್ಷಣ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಸದ್ದು ಮಾಡಿದ್ದರು.
ಅಷ್ಟಕ್ಕೂ ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದು ಸರಿಯೇ? ಇದೀಗ ಖಾತೆ ಬದಲಾವಣೆಯ ನಿರ್ಧಾರ ಸರಿಯೇ? ಎಂಬ ಕುರಿತು ಮತ್ತೊಮ್ಮೆ ಚರ್ಚೆ ಎದ್ದಿದೆ. ಬದಲಾಯಿಸುವುದಾದರೆ ಅಂಥ ಖಾತೆಯನ್ನು ಯಾಕೆ ನೀಡಬೇಕು? ಈ ಖಾತೆಯನ್ನು ತಮ್ಮ ಬಳಿ ಸಮರ್ಥವಾಗಿ ನಿಭಾಯಿಸಲು ಸಾಧ್ಯವಿಲ್ಲ ಎಂದು ಸ್ವತಃ ದೇವೇಗೌಡರೇ ಒಪ್ಪಿಕೊಂಡಿದ್ದಾರಾ?
ಬೆಂಬಲಿಗರ ಒತ್ತಾಯ: ಜಿಟಿ ದೇವೇಗೌಡರ ಖಾತೆ ಬದಲಾವಣೆ ಸಾಧ್ಯತೆ
ಈ ಖಾತೆಯನ್ನು ನಿಭಾಯಿಸಲು ಇಷ್ಟವಿಲ್ಲದ ದೇವೇಗೌಡರು, ‘ಖಾತೆ ಬದಲಾಯಿಸುವಂತೆ ಬೆಂಬಲಿಗರ ಒತ್ತಾಯ’ ಎಂಬ ಸಬೂಬು ನೀಡುತ್ತಿದ್ದಾರಾ? ಇತ್ಯಾದಿ ಪ್ರಶ್ನೆಗಳು ಈ ಪ್ರಹಸನದ ಸುತ್ತ ಎದ್ದಿವೆ! ಅಷ್ಟಕ್ಕೂ ಜಿ ಟಿ ದೇವೇಗೌಡರ ಖಾತೆ ಬದಲಾವಣೆ ತಪ್ಪೆ, ಸರಿಯೇ?
ವಿದ್ಯಾರ್ಹತೆ 8 ನೇ ತಗರಗತಿ, ಖಾತೆ-ಉನ್ನತ ಶಿಕ್ಷಣ!
ಜೂನ್ 8 ರಂದು ಖಾತೆ ಹಂಚಿಕೆ ಸಂದರ್ಭದಲ್ಲಿ ಜಿಟಿ ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆ ನೀಡಲಾಗಿತ್ತು. ಚುನಾವಣೆಗೂ ಮುನ್ನವೇ ಜೆಡಿಎಸ್ ಅಧಿಕಾರ ನಡೆಸುವುದಾದರೆ ಜಿಟಿಡಿ ಅವರಿಗೆ ಮಂತ್ರಿಸ್ಥಾನ ಗ್ಯಾರಂಟಿ ಎನ್ನಲಾಗಿತ್ತು. ಅದರಲ್ಲೂ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಪರ್ಧಿಸಿದ ಮೇಲಿಂದ ಮತ್ತು ಗೆದ್ದ ಮೇಲಿಂದ ಅವರ ವರ್ಚಸ್ಸು ಹೆಚ್ಚಿದೆ. ಆ ಕಾರಣದಿಂದ ಅವರಿಗೆ ಮಂತ್ರಿಸ್ಥಾನವನ್ನು ನೀಡಲೇಬೇಕಾದ ಋಣದಲ್ಲಿ ಎಚ್ ಡಿ ಕುಮಾರಸ್ವಾಮಿ ಇದ್ದರು!
ಎಚ್ಡಿಕೆಗೆ ರಾಹುಲ್ ಗಾಂಧಿ ಕರೆ: ಕಾಂಗ್ರೆಸ್ ನಾಯಕರಿಗೆ ಆಘಾತ!
ಸಾಮರ್ಥ್ಯ ನೋಡಿ ಖಾತೆ ಕೊಡಿ
ಒಬ್ಬ ಶಾಸಕನ ಸಾಮರ್ಥ್ಯ ನೋಡಿ ಖಾತೆಯನ್ನು ಹಂಚಿಕೆ ಮಾಡಬೇಕಲ್ಲವೇ? ಜಿ ಟಿ ದೇವೇಗೌಡರು ಅನುಭವಿ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರು ಪರಿಣತಿ ಪಡೆದ ಕ್ಷೇತ್ರ ಬೇರೆಯೇ ಇದ್ದಿರಬಹುದು. 8 ನೇ ತರಗತಿಯವರೆಗೆ ವಿದ್ಯಾರ್ಹತೆ ಇರುವ ವ್ಯಕ್ತಿಗೆ ಉನ್ನತ ಶಿಕ್ಷಣದಂಥ ಖಾತೆ ನೀಡಿದರೆ ಜನರೆದುರು ನಗೆಪಾಟಲಾಗಬೇಕಾದೀತು ಎಂಬ ಅರಿವು ಸರ್ಕಾರಕ್ಕೆ ಇಲ್ಲದೆ ಹೋಯಿತೆ?
ಸೋಲೊಪ್ಪಿಕೊಂಡರೆ ಜಿಟಿಡಿ?
ಒಬ್ಬ ಸಚಿವ ಎಂದ ಮೇಲೆ ಯಾವ ಖಾತೆಯನ್ನು ಕೊಟ್ಟರೂ ನಿಭಾಯಿಸಬಲ್ಲೆ ಎಂಬ ವಿಶ್ವಾಸವಿರಬೇಕು. ಆದರೆ ಉನ್ನತ ಶಿಕ್ಷಣ ಖಾತೆ ನನಗೆ ಹೇಳಿಮಾಡಿಸಿದ್ದಲ್ಲ ಎಂದು ಸ್ವತಃ ಜಿಟಿ ದೇವೇಗೌಡರೇ ಸೋಲೊಪ್ಪಿಕೊಂಡಿದ್ದಾರಾ ಎಂಬ ಅನುಮಾನ ಅವರ ನಡೆಯಿಂದ ಕಾಣುತ್ತಿದೆ. ಇದೀಗ ಜಿಟಿ ದೇವೇಗೌಡರಿಗೆ ಬೇರೆ ಖಾತೆ ನೀಡಿದರೆ ಉಳಿದ ನಾಯಕರ ಪ್ರತಿಕ್ರಿಯೆ ಹೇಗಿದ್ದೀತು? ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕರೆ ಸಾಕೆಂದು ಕೆಲವರು ತುದಿಗಾಲಿನಲ್ಲಿರುವಾಗ ಜಿಟಿಡಿ ಅವರು ‘ಇದು ಬೇಡ, ಅದು’ ಎನ್ನುತ್ತಿದ್ದರೆ ಶಾಸಕರಲ್ಲಿ ಅಸಮಾಧಾನ ಬರದೇ ಹೋದೀತೆ?
ಜಿಟಿಡಿ ಕಣ್ಣು ಯಾವ ಖಾತೆಯ ಮೇಲೆ?
ಅಷ್ಟಕ್ಕೂ ಜಿಟಿಡಿ ಅವರು ಉನ್ನತ ಶಿಕ್ಷಣ ಖಾತೆ ತಮಗೆ ತಕ್ಕುದಲ್ಲ ಎಂದರೋ ಅಥವಾ ಯಾವುದಾದರೂ ನಿರ್ದಿಷ್ಟ ಖಾತೆಯ ಮೇಲೆ ಕಣ್ಣಿಟ್ಟು ಈ ಖಾತೆ ಬೇಡ ಎಂದರೋ ಎಂಬುದು ಅರ್ಥವಾಗದ ವಿಷಯ. ಮೈಸೂರಿನ ಇನ್ಪೋಸಿಸ್ ವಸತಿಗೃಹದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ಜಿಟಿಡಿ ಹೊಸ ಖಾತೆಯ ನಿರೀಕ್ಷೆಯಲ್ಲಿದ್ದಾರೆ. ಅದಕ್ಕೆ ಎಚ್ಡಿಕೆ ಸಹ ಧನಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗುತ್ತಿದೆ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.
Allow Notifications
You have already subscribed
English summary
Debate: Coalition government in Karnataka has given higher education portfolio to 8th pass out GT Devegowda. This issue creates lot of controversy in the state. Now CM HD Kumaraswamy decided to change Devegowda’s portfolio. Here is a debate on it.
